Saturday, June 20, 2009
ತೇಜಸ್ವಿ
ಪೂಚಂತೇಯವರ ಮೊದಲ ಪುಸ್ತಕ ನಾನು ಓದಿದ್ದು “ಕರ್ವಲೋ”. ಆಗ ನಾನಿನ್ನೂ ಚಿಕ್ಕ ಹುಡುಗ, ಐದ್ನೇ ಕ್ಲಾಸಲ್ಲಿದ್ದೆ. ಹೈಸ್ಕೂಲಿನಲ್ಲಿದ್ದ ಅಣ್ಣನಿಗೆ ಸಾಹಿತ್ಯಕ್ಕೆ ಬಹುಮಾನವಾಗಿ ಈ ಪುಸ್ತಕ ಕೊಟ್ಟಿದ್ರು ( ತಟ್ಟೆ ಪ್ಲೇಟು ಬಹುಮಾನವಾಗಿ ಕೊಡೋ ಪದ್ದತಿ ಆ ಸ್ಕೂಲಿನಲ್ಲಿರಲಿಲ್ಲ). ನನಗೆ ಅದು ದೆವ್ವ ಭೂತಗಳ ಕಥೆಗಳನ್ನು ಒದೋ ಕಾಲ ( ಅರೇಬಿಯನ್ ನೈಟ್ಸ್, ವಿಕ್ತ್ರಮ ಬೆತಾಳನ ಕಥೆಗಳು ). “ಕರ್ವಲೊ” ಕೇಳೊಕೆ ಹೆಸರು ವಿಚಿತ್ರವಾಗಿತ್ತು , ಕೇಳಿದ್ರೆ ” ಕರ್ವಲೊ ಅಂತ ಒಬ್ಬ ವಿಜ್ನಾನಿ , ಅವರೂ ಮತ್ತೆ ಕೆಲವರೂ ಹಾರೋ ಉಡದ ಹಿಂದೆ ಹೋಗೊ ಕಥೆ”.
ಹಾಗೊ ಹೀಗೊ ಮುಗಿಸಿದೆ … ಹೀರೋ ಭೂತದ ಜೊತೆಗೆ ಫೈಟಿಂಗ್ ಮಾಡ್ಲಿಲ್ಲ ಅಂತ ಸೊಲ್ಪ ಬೇಜರಾಯ್ತು. ಕ್ಲಾಸಿಕ್ ಪುಸ್ತಕಗಳೇನೆಂದರೆ ಐಡಿಯಾನೇ ಇರ್ಲಿಲ್ಲ. ಶಾಲೆಯ ಗಣಿತ ಪುಸ್ತಕಕ್ಕಿಂತಲೂ ದಪ್ಪದ ಪುಸ್ತಕ ಓದಿಬಿಟ್ಟೆ ಎಂಬ ಹೆಮ್ಮೆ ಅಶ್ಟೇ. ಅರ್ಥ ಮಾಡಿಕೊಳ್ಳಿ “ಸುರಂಗದಲ್ಲಿ ಸಮಾಧಿ” ಓದೋ ಕಾಲ ಅದು. ಕತ್ತೆಗೇನು ಗೊತ್ತು ಕಸ್ತೋರಿ ಗಂಧ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಏಳೆಂಟು ಸಲ ಓದಿ ಜಸ್ಟಿಸ್ ಕೊಟ್ಟೆ ಪುಸ್ತಕಕ್ಕೆ.
ಮುಂದಿನ ವರ್ಷ ಅಣ್ಣ “ಶಿವನಿಪಳ್ಳಿಯ ಕಪ್ಪು ಚಿರತೆ” ತಂದ, ಬಹುಮಾನವಾಗಿ. “ಕೆನ್ನೆತ್ ಆಂಡರ್ಸನ್” ಸ್ವತಂತ್ರ್ಯಪೂರ್ವ ಬೆಂಗಳೂರಿನಲ್ಲಿ ಬೇಟೆಯಾಡಿದ ನರಭಕ್ಷಕ ಚಿರತೆ ಹುಲಿಗಳ ಕಥೆಗಳು. ನನ್ನ್ನ ಪೋಚಂತೇ ಅನುವಾದ. ಪುಟಪುಟವೂ ರೊಮಾಂಚಕವಾಗಿತ್ತು. ಆಂಡರ್ಸನ್ ಯಾರೋ ಕೇಳಿ ಗೊತ್ತಿಲ್ಲ , ತೇಜಸ್ವಿಯಂತೂ ಒಂದುವರ್ಷದಿಂದ ಪರಿಚಯ. ಸೊ.. ಇನ್ನೂ “ಶಿವನಿಪಳ್ಲಿ..” ಬೇಟೆಯಾಟ ನೋಡಿದ್ರೆ ತೇಜಸ್ವಿ ಬೇಟೆಗಳೇ ನೆನಪಾಗುತ್ತೆ.
ಮಧ್ಯದಲೊಮ್ಮೆ ನಮ್ಮ ಹಳ್ಳಿ ಪೊಲೀಸ್ ಮಾಮನಲ್ಲಿ ಕಾಡಿ ಬೇಡಿ ಅವರ ಕಲೆಕ್ಶನ್ನಿಂದ ‘ಮಿಸ್ಸಿಂಗ್ ಲಿಂಕ್” ಓದಿದ್ದೆ. “ನಿಯಾಂಡರ್ತಲ್ , ಕ್ರೊ – ಮ್ಯಾಗ್ನನ್” ಮನುಷ್ಯರ ಬಗ್ಗೆ ಬರೆದಿದ್ದ್ರು ತೇಜಸ್ವಿ.
ಮುಂದಿನ ವರ್ಷ ನನ್ನ ಹೊಟ್ಟೆ ಉರಿಸೊಕ್ಕೆ ಇನ್ನೊಂದು ಪುಸ್ತಕ ಬಂತು. ನಾನಿನ್ನೂ ತಟ್ಟೆ ಪ್ಲೇಟು ಬಹುಮಾನ ಕೊಡುವ ಸ್ಕೂಲ್ನಲ್ಲೇ ಓದುತಿದ್ದೆ. “ಪರಿಸರದ ಕಥೆಗಳು” ಅದ್ಭುತವಾದ ಪುಸ್ತಕ. ನನಗಿನ್ನೂ ತೇಜಸ್ವಿ ಅಂದ್ರೆ “ಪರಿಸರದ ಕಥೆಗಳು” … ಬಂದೂಕು ಬೆನ್ನಿಗೇರಿಸಿ , ಪ್ಯಾರ , ಮಾರ ( ಇನ್ನೂರೈವತ್ತು ವರ್ಷದ ಹುಡುಗ ) ಮತ್ತು ಕಿವಿ ( ಬೇಟೆ ನಾಯಿ ) ಜೊತೆ ಕಾಡು ಮೇಡುಗಳಲ್ಲಿ ತಿರುಗಾಡಿ ಪರಿಸರದ ಬಗ್ಗೆ ಬರೆದ ಸಾಹಿತಿ. ಸುಷ್ಮಿತಾಗೆ ಹಕ್ಕಿಮರಿ ಪಾಟ ಹೇಳಿ , ಊರ ಮೇಸ್ತ್ರಿ ಜೊತೆ ಜಗಳ ಮಾಡೊ ಈ ಯುವಕ ಇನ್ನಿಲ್ಲ ಅಂದ್ರೆ ಹೇಗೆ ತಾನೆ ವಿಶ್ವಾಸ ಮಾಡ್ಲಿ. ಪರಿಸರದ ಕಥೆಗಳು ಯಾವ ಜಮಾನಾದ್ದು ಅಂತ ಯಾವಾಗ್ಲೂ ರೀಸರ್ಚ್ ಮಾಡ್ಲಿಲ್ಲ. ಎಪ್ಪತ್ತು ವರ್ಷದ ಸಾಹಿತಿ ಅಂತ ನ್ಯೂಸಿನಲ್ಲಿ ಓದಿದ್ದೆ, ಯಾಕೋ ಬೇಜಾರಾಯ್ತು… ಬದುಕಿದ್ದಾಗ ಒಮ್ಮೆನೂ ಭೆಟ್ಟಿಯಾಗ್ಲಿಲ್ಲವಲ್ಲ ಅಂತ.
ಆ ಪುಸ್ತಕ ಓದಿದ್ಮೇಲೆ ತಂದೆ ತಾಯಿಯಿಂದ ಸಾಕಶ್ತೂ ಬೈಸಿಕೊಂದಿದ್ದೇನೆ. ಕಾಡು ಹಂದಿ ಹುಡುಕಿ ಬೆಟ್ಟಕಾಡು ( ಚಿಕ್ಕವುಗಳು ) ಓಡಾಡಿ ಅಂಗಿ ಚಡ್ಡಿ ಹರ್ಕೋಂಡು , ನಾಲ್ಕೈದು ಪರ್ಸೆಂಟ್ ಮೆಲನಿನ್ ಹೆಚ್ಚು ಮಾಡ್ಕೊಂಡು ಬಂದ್ರೆ ಯಾರಿಗೆ ತಾನೆ ಖುಶಿಯಾಗುತ್ತೆ. ನಾನೂ ನನ್ ಪಟಾಲಂ ನಾಮಗೋಳಿಗಳೂ, ಜಕಾನಾ ( ಪೂಚಂತೇ ಪುಸ್ತಕದಲ್ಲೇ ಓದಿದ್ದು , ಈ ತನಕ ನೋಡಿಲ್ಲ ) ಹಳ್ಳ ಕೆರೆಯಲ್ಲಿ ಹುಡುಕಾಡಿದ್ದು, ಕೊನೆಗೆ ಯಾವುದೊ ಮೀನುಗಳನ್ನು ಜೀವಂತ ಹಿಡಿದು ವಟಾರದ ಬಾವಿಯಲ್ಲಿ ಬಿಟ್ಟದ್ದು , ನಿಮ್ಮ ಬಾವಿ ಕ್ಲೀನ್ ಆಗುತ್ತೆ ಅಂತ ಆಶೀರ್ವಾದ ಮಾಡಿದ್ದು … ಎಲ್ಲಾ ಪೂರ್ಣಚಂದ್ರ ತೇಜಸ್ವಿ ಪುಸ್ತಕ ಪ್ರಭಾವನೇ.
“ಜುಗಾರಿ ಕ್ರಾಸ್ “ ಕೊಂಡು ಓದಿದ ಪುಸ್ತಕ. ಆದ್ರೆ ಅವು ಮನಸಿನಲ್ಲಿ ಉಳಿಲಿಲ್ಲ. ಹೈ ಸ್ಕೂಲ್ ಮುಗಿದ್ಮೇಲೆ ಕನ್ನಡ ಪುಸ್ತಕ ಓದೋ ಅವಕಾಶ ಸಿಗ್ಲಿಲ್ಲ. ಇದ್ದ ಬಿದ್ದ ಟೈಮ್ ಎಲ್ಲಾ ಇಂಬ್ಳಿಸು ಒದಕ್ಕೇ ಆಗೋಯ್ತು. ಕನ್ನಡ ಮೀಡಿಯಂ ಕೋತಿಯೊಬ್ಬ ಇಂಬ್ಳೀಸು ಲೈಫಿಗೆ ಅಡ್ಜುಸ್ಟು ಆಗ್ಬೇಕಲ್ಲ.
ತೇಜಸ್ವಿ ಇನ್ನಿಲ್ಲ. ಕನ್ನಡ ಸಾಹಿತ್ಯದಲ್ಲಿ ಒಂದು ಶೂನ್ಯ … ಹೇಳೊ ಮಾತಲ್ಲ ಇದು. ನಿಜಕ್ಕೂ ಒಂದು ಜಾಗ ಶೂನ್ಯ ಬಂದು ಬಿಟ್ಟಿದೆ. ಅವರ ಶೈಲಿಯಲ್ಲಿ , ಅವರ ತರಹ ಬರೆಯುವವರು ಯಾರೂ ಇಲ್ಲ. ಪೂಚಂತೇ
Subscribe to:
Post Comments (Atom)
No comments:
Post a Comment